ರೋಡಿನ್, ಅಗಸ್ಟ್
1840-1917. ಫ್ರಾನ್ಸ್ ದೇಶದ ಪ್ರಸಿದ್ಧ ಶಿಲ್ಪಿ ಹಾಗೂ ಚಿತ್ರ ಕಲಾವಿದ. 1840 ನವೆಂಬರ್ 12ರಂದು ಪ್ಯಾರಿಸ್‍ನಲ್ಲಿ ಜನಿಸಿದ. 1854ರಲ್ಲಿ ಚಿತ್ರರಚನಾ ಶಾಲೆಯೊಂದರಲ್ಲಿ ಪ್ರವೇಶ ಪಡೆದು ಅಲ್ಲಿ ರೇಖಾರಚನೆ ಹಾಗೂ ಮಾಡೆಲಿಂಗ್‍ನಲ್ಲಿ ತರಬೇತಿ ಹೊಂದಿದ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣನಾದ ಪ್ರಯುಕ್ತ ಇಕೋಲ್ ದ ಬ್ಯೂ ಆಟ್ರ್ಸ್ ಸಂಸ್ಥೆಗೆ ಪ್ರವೇಶ ಪಡೆಯಲು ಈತ ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ (1857). ಮರುವರ್ಷವೆ ಶಿಲ್ಪದಲ್ಲಿ ಕುಸುರಿ ಕೆಲಸ ಮಾಡುವುದನ್ನು ಅಭ್ಯಸಿಸಿಕೊಂಡು ತನ್ನ ಜೀವನಕ್ಕೆ ಸಂಪಾದಿಸಿಕೊಳ್ಳುವ ನಿಪುಣತೆಯನ್ನು ಸಾಧಿಸಿದ. 1862ರಲ್ಲಿ ಈತನ ಅಚ್ಚುಮೆಚ್ಚಿನ ಸಹೋದರಿ ಮೇರಿ ತೀರಿಕೊಂಡಾಗ ಪಾದ್ರಿಯಾಗ ಬೇಕೆಂದೂ ಈತ ಆಲೋಚಿಸಿದ್ದುಂಟು. ಆದರೆ 1864ರಲ್ಲಿ ಯುವ ಶಿಲ್ಪಿ ಮೇರಿಬೂರೆ ಎಂಬವಳ ಭೇಟಿಯಾದ ಅನಂತರ ತನ್ನ ಆಲೋಚನೆ ಯನ್ನು ಬದಲಿಸಿಕೊಂಡ. ಆಕೆ ರೋಡಿನ್‍ನ ಬದುಕಿನುದ್ದಕ್ಕೂ ಸಂಗಾತಿ ಯಾದಳು. 1917ರಲ್ಲಿ ಆಕೆ ಸಾಯುವುದಕ್ಕೆ ಕೆಲವು ವಾರಗಳ ಮೊದಲು ಈತ ಅವಳನ್ನು ಶಾಸ್ತ್ರೋಕ್ತವಾಗಿ ಮುದುವೆಯಾದ. 

ಈತ 1864ರಲ್ಲಿ ರಚಿಸಿದ ಮ್ಯಾನ್ ವಿತ್ ಎ ಬ್ರೋಕನ್ ನೋಸ್ (ಒಡೆದ ಮೂಗಿನ ಮನುಷ್ಯ) ಕೃತಿಯನ್ನು ಅಧಿಕೃತ ಪ್ರದರ್ಶನ ಕಾರರು ತಿರಸ್ಕರಿಸಿದರು; ಆ ವೇಳೆಗಾಗಲೇ ಈತ ಶಿಲ್ಪಿ ಕರಿಯಾರ್ ಬೆಲೋಸ್‍ನ ಶಿಷ್ಯತ್ವದಲ್ಲಿದ್ದ. 1871ರಲ್ಲಿ ಈತ ಬೆಲೋಸ್‍ನೊಡನೆ ಸಾರ್ವಜನಿಕ ಸ್ಮಾರಕಗಳ ಅಲಂಕರಣ ಕಾರ್ಯಕ್ಕಾಗಿ ಬ್ರಸೆಲ್ಸ್‍ಗೆ ಹೋದ. ಅದರೆ ಬೆಲೋಸ್ ಈತನನ್ನು ಮುಂದುವರಿಸಲಿಲ್ಲ.

1875ರಲ್ಲಿ ತನ್ನ 35ನೆಯ ವಯಸ್ಸಿನಲ್ಲಿ ವೈಯಕ್ತಿಕ ಶೈಲಿಯೊಂದನ್ನು ರೂಪಿಸಿಕೊಳ್ಳಬೇಕೆಂಬ ಒತ್ತಡಕ್ಕೆ ಒಳಗಾದ ಈತ ಅಲಂಕಾರ ಕೆಲಸದಲ್ಲಿ ಹೆಚ್ಚುತೊಡಗಿಕೊಂಡಿದ್ದ. ಇಂಥ ಸನ್ನಿವೇಶದಲ್ಲಿ ಅತ್ಯಗತ್ಯ ವಾಗಿದ್ದ ಪ್ರಚೋದನೆಯನ್ನು ಇಟಲಿ ನೀಡಿತು. ಬ್ರಸೆಲ್ಸ್‍ಗೆ ಮರಳುವ ಮೊದಲು ಈತ ಜಿನೊವ, ರೋಮ್, ನೇಪ್ಲೀಸ್ ಹಾಗೂ ವೆನಿಸ್ ನಗರಗಳಿಗೆ ಭೇಟಿ ನೀಡಿದ. ಮೈಕೆಲಂಜೆಲೊ ಹಾಗೂ ಡೊನೆಟೆಲೊ ಅವರ ಪ್ರಭಾವದಿಂದಾಗಿ ಹೊಸ ಮಾರ್ಗವೊಂದನ್ನು ಹುಡುಕಿಕೊಳ್ಳಲು ಅನುಕೂಲವಾಯಿತು. ಆ ಸ್ಫೂರ್ತಿಯ ಪರಿಣಾಮವಾಗಿ ರೋಡಿನ್ ತನ್ನ ಮೊಟ್ಟಮೊದಲ ಸ್ವೋಪಜ್ಞ ಕೃತಿ ದ ವ್ಯಾಂಕ್ವಿಷ್ಡ್ (ಸೋತವನು) ರಚಿಸಿದ. ಪರಾಭವಗೊಂಡು ಕುಸಿದ ಚೈತನ್ಯ ಮತ್ತೆ ಜನ್ಮ ಪಡೆಯಲು ಪ್ರಯತ್ನಿಸುತ್ತಿರುವ ಭಾವ ಈ ಕೃತಿಯಲ್ಲಿ ಕಂಡುಬರುತ್ತದೆ. ಆದರೆ ಇದೇ ಕೃತಿ ಬ್ರಸೆಲ್ಸ್‍ನಲ್ಲಿ ಹಾಗೂ 1877ರಲ್ಲಿ ಪ್ಯಾರಿಸ್‍ನಲ್ಲಿ ಏಜ್ ಆಫ್ ಬ್ರಾನ್ಸ್ (ಹಿತ್ತಾಳೆ ಯುಗ) ಎಂಬ ಹೊಸ ಹೆಸರು ಹೊತ್ತು ಪ್ರದರ್ಶನವಾದಾಗ ಜನ ಪ್ರತಿಭಟಿಸಿದರು. ರೋಡಿನ್ ತನ್ನ ಕೃತಿಯನ್ನು ಹೆಚ್ಚು ವಾಸ್ತವಗೊಳಿಸಿದ್ದುದೇ ಈ ಬಗೆಯ ಪ್ರತಿಕ್ರಿಯೆಗೆ ಕಾರಣ. ತನ್ನ ಸಮಕಾಲೀನ ಶಿಲ್ಪಿಗಳಿಗಿಂತ ಭಿನ್ನವಾಗಿ ಕೃತಿರಚನೆ ಮಾಡಿದುದಲ್ಲದೆ ಒಬ್ಬ ಜೀವಂತ ವ್ಯಕ್ತಿಯ ನಕಲಿನಂತಿದೆ ಎಂದು ಉಳಿದವರು ಆಪಾದಿಸಿದ ರು. ಈತ ವಾಸ್ತವತೆಯನ್ನು ವಿಪರೀತಕ್ಕೆ ಕೊಂಡೊಯ್ದನೆಂಬುದು ಟೀಕಾಕಾರರ ವಾದವಾಗಿತ್ತು. 

1877ರಲ್ಲಿ ಈತ ಪ್ಯಾರಿಸ್‍ಗೆ ಮರಳಿದ. ಇವನ ಒಂದು ಕಾಲದ ಗುರು ಕರಿಯರ್ ಬೆಲೋಸ್ ತನ್ನ ಶಿಷ್ಯನನ್ನು ಸಂಪೂರ್ಣವಾಗಿ ಮರೆತಿರಲಿ ಲ್ಲ; ಹಾಗಾಗಿ, 1879ರಲ್ಲಿ ಆತ ಸೆವರ್‍ನ ಪಿಂಗಾಣಿ ಕಾರ್ಖಾನೆಯ ನಿರ್ದೇಶಕನಾದಾಗ ವಿನ್ಯಾಸಗಳನ್ನು ಮಾಡಬೇಕೆಂದು ಇವನಿಗೆ ಆಹ್ವಾನ ಬಂದಿತು. ಲಂಡನ್ ಮತ್ತು ಪ್ಯಾರಿಸ್ ನಗರಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಬೇರೆ ಬೇರೆ ಸ್ಮಾರಕಗಳ ವಿಚಾರವಾಗಿ ಸ್ಪರ್ಧೆ ಏರ್ಪಟ್ಟಾಗ ಈತ ಆಯ್ಕೆಯಾಗಲಿಲ್ಲ; ಆದರೆ ಅಂತಿಮವಾಗಿ ಪ್ಯಾರಿಸ್‍ನ ಸಿಟಿ ಹಾಲ್ ಹೋಟೆಲ್ಲಿಗೆ ಒಂದು ಪ್ರತಿಮೆಯನ್ನು ನಿರ್ಮಿಸಬೇಕೆಂದು ಕರೆ ಬಂದಿತು. ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಪ್ರೀಚಿಂಗ್ (ಉಪದೇಶ ಮಾಡುತ್ತಿರುವ ಸಂತ ಬ್ಯಾಪ್ಪಿಸ್ಟ್) ಕೃತಿಯ ಮೂಲಕ ತನ್ನ ವೈಯಕ್ತಿಕ ಶೈಲಿಯನ್ನು ರೂಪಿಸಲು ಈತ 1878ರಲ್ಲಿ ಪ್ರಯತ್ನಿಸಿದ. ಈ ಶಿಲ್ಪದಿಂದ ಒದಗಿದ ಯಶಸ್ಸು ಅಂತೆಯೇ ಹಿತ್ತಾಳೆ ಯುಗ ಎಂಬ ಕೃತಿ 1886ರಲ್ಲಿ ಪ್ಯಾರಿಸ್ ಹಾಗೂ ಬ್ರಸೆಲ್ಸ್‍ನಲ್ಲಿ ಗಳಿಸಿದ ಯಶಸ್ಸುಗಳಿಂದಾಗಿ ಈತ ತನ್ನ 40ನೆಯ ವಯಸ್ಸಿನಲ್ಲಿ ಒಬ್ಬ ಉತ್ತಮ ಶಿಲ್ಪಿ ಎಂಬ ಖ್ಯಾತಿಯನ್ನು ಪಡೆದ.
ಸಾಮಾನ್ಯವಾಗಿ ಬಹುತೇಕ ಕಲಾವಿದರು ತಮ್ಮ ಹೆಚ್ಚಿನ ಕೃತಿಗಳನ್ನು ಪೂರೈಸಿರಬಹುದಾದ ವಯಸ್ಸಿನಲ್ಲಿ ಈತ ತನ್ನ ವೈಯಕ್ತಿಕ ಶೈಲಿಯನ್ನು ಕಂಡುಕೊಳ್ಳಲು ಹುಡುಕಾಟ ನಡೆಸಿದ್ದ. ಕಲಾ ಸಂಗ್ರಹಾಲಯದ ಹಿತ್ತಾಳೆ ದ್ವಾರವನ್ನು ನಿರ್ಮಿಸಲು ಸರ್ಕಾರದಿಂದ ದೊರೆತ ನಿಯೋಜನೆಯ ಕಾರಣದಿಂದಾಗಿ ಈತ ಎರಡು ಕಾರ್ಯಾಗಾರಗಳನ್ನು ತೆರೆಯುವುದು ಸಾಧ್ಯವಾಯಿತು; ಅಷ್ಟೇ ಅಲ್ಲ, ಮುಂದೆ ಈತನಿಗೆ ಹಣಕಾಸಿನ ತೊಂದರೆ ಯಿಲ್ಲದಂಥ ಸ್ಥಿತಿವಂತಿಕೆ ಪ್ರಾಪ್ತವಾಯಿತು.

ಹಿತ್ತಾಳೆ ಬಾಗಿಲು ಈತ ತನ್ನ ಜೀವಿತಾವಧಿಯಲ್ಲಿ ರಚಿಸಿದ ಅತ್ಯಂತ ಮಹತ್ತ್ವದ ಕೃತಿ ಎಂಬ ಪ್ರಶಂಸೆಗೆ ಪಾತ್ರವಾಗಿದೆ. 1884ರಲ್ಲೇ ಇದನ್ನು ಪೂರ್ಣಗೊಳಿಸಿ ಒಪ್ಪಿಸಬೇಕೆಂಬ ಒಪ್ಪಂದವಾಗಿದ್ದರೂ 1917ರಲ್ಲಿ ರೋಡಿನ್ ತೀರಿಕೊಂಡಾಗಲೂ ಇದು ಮುಗಿದಿರಲಿಲ್ಲ. ಡಾಂಟೆಯ ಡಿವೈನ್ ಕಾಮಿಡಿ ಮಹಾಕಾವ್ಯದ ದೃಶ್ಯಗಳನ್ನು ಆ ಬಾಗಿಲ ಮೇಲೆ ರೂಪಿಸಬೇಕಾಗಿತ್ತಲ್ಲದೆ ಅಂತಿಮವಾಗಿ ಅದಕ್ಕೆ ಗೇಟ್ಸ್ ಆಫ್ ಹೆಲ್ (ನರಕದ  ದ್ವಾರಗಳು) ಎಂದು ಪುನರ್ನಾಮಕರಣ ಮಾಡಲಾಯಿತು. 15ನೆಯ ಶತಮಾನದ ಇಟಾಲಿಯನ್ ಶಿಲ್ಪಿ ಲೊರೆಂಜೊ ಗಿಬರ್ಟಿ ಎಂಬಾತ ಫ್ಲಾರೆನ್ಸ್‍ನ ಇಗರ್ಜಿಯ ಬಾಗಿಲ ಮೇಲೆ ಸ್ವರ್ಗದ ಬಾಗಿಲುಗಳು ಎಂದು ಮೂಡಿಸಿದ್ದ ಕೃತಿಯಿಂದ ಈತ ಪ್ರಭಾವಿತನಾಗಿದ್ದ. ಆದರೆ ಚಿತ್ರಕಲಾವಿದ ಆಲ್ಪೊನ್ಸ್ ಲೆಗ್ರೊಸ್‍ನ ಆಹ್ವಾನದ ಮೇರೆಗೆ 1881ರಲ್ಲಿ ಲಂಡನ್ನಿಗೆ ಭೇಟಿ ನೀಡಿದ ಅನಂತರ ಈತನ ಯೋಜನೆಯಲ್ಲಿ ಗಣನೀಯವಾದ ಬದಲಾವಣೆಯಾದವು. ಡಾಂಟೆಯಿಂದ ಸ್ಫೂರ್ತಿಗೊಂಡು ರಚಿತವಾದ ಅನೇಕ ರ್ಯಾಫೆಲೈಟ್-ಪೂರ್ವ ವರ್ಣಚಿತ್ರಗಳು ಹಾಗೂ ರೇಖಾಚಿತ್ರಗಳನ್ನೂ ವಿಲಿಯಂ ಬ್ಲೇಕ್‍ನ ಭ್ರಮಾತ್ಮಕ ಚಿತ್ರಗಳನ್ನೂ ಅಲ್ಲಿ ಈತ ನೋಡಿದ. ಹಾಗಾಗಿ, ಆ ವೇಳೆಗಾಗಲೇ ತನ್ನ ಮನಸ್ಸಿನಲ್ಲಿ ಪರಿಕಲ್ಪಿತವಾಗಿದ್ದ “ದ್ವಾರ”ಗಳಿಗೆ ಬದಲಾಗಿ ಬೇರೆ ಬಗೆಯ ಚಿಂತನೆಗಳು ಮೂಡಿ ಪ್ರೀತಿ, ನೋವು ಹಾಗೂ ಸಾವನ್ನು ಪ್ರತಿಬಿಂಬಿಸುವ ರಚನೆಯತ್ತ ಮನಸ್ಸು ವಾಲಿತು. ಪೂರ್ಣಗೊಳ್ಳದ ಆ ಸ್ಮಾರಕದ ಒಡಲಿನಿಂದಲೇ ಅನೇಕ ಬಿಡಿ ಕೃತಿಗಳನ್ನು ಈತ ಬೇರ್ಪಡಿಸಿಕೊಂಡಿರುವುದನ್ನು  ಕಾಣಬಹುದು. ಆ ಹಿನ್ನೆಲೆಯಲ್ಲೇ ಇವನ ಲೋಕಪ್ರಸಿದ್ಧ ಥಿüಂಕರ್ (ಚಿಂತಕ 1900) ರೂಪಿತವಾದದು. ಮೂಲತಃ ಆ ದ್ವಾರದ ಮೇಲ್ಭಾಗದಲ್ಲಿ ಡಾಂಟೆಯ ಚಿತ್ರವಾಗಿ ಪಡೆಮೂಡ ಬೇಕಾಗಿದ್ದ ಕೃತಿ ಇದು.

ಇವನ ಕೀರ್ತಿ ಹಬ್ಬತೊಡಗಿದಂತೆ ಈತನ ಮೇರೆಮೀರಿದ ಕಾಮದ ತೃಷೆಯಿಂದಾಗಿ ಇವನ ಖಾಸಗಿ ಬದುಕು ಅಸ್ತವ್ಯಸ್ತವಾಯಿತು. 1885ರಲ್ಲಿ ತನ್ನ ಶಿಷ್ಯೆಯೊಬ್ಬಳ ಪ್ರಿಯತಮನಾದ. ಆ ಶಿಷ್ಯೆಯೇ ಕವಿ ಪಾಲ್ ಕ್ಲಾಡೆಲ್‍ನ ಅತ್ಯಂತ ಪ್ರತಿಭಾನ್ವಿತ ಸೋದರಿ ಕ್ಯಾಮಿಲ್ ಕ್ಲಾಡೆಲ್. ಅನೇಕ ಜಗಳಗಳಿಂದ ಕೂಡಿದ ಪ್ರೇಮಸಂಬಂಧವಾಗಿ ಇದು ಗೋಚರಿಸುತ್ತದೆಯಲ್ಲದೆ 1898ರಲ್ಲಿ ಆಕೆ ಬುದ್ಧಿ ಭ್ರಮಣೆಗೆ ಒಳಗಾಗುವ ತನಕ ಇವರ ಸಂಬಂಧ ಮುಂದುವರಿಯಿತು. ಇವರು ಒಬ್ಬರನ್ನೊಬ್ಬರು ಗಾಢವಾಗಿ ಪ್ರಿತಿಸುತ್ತಿದ್ದರೆಂಬುದು ನಿಜ. ಪ್ರೇಮದ ಪರಾಕಾಷ್ಠೆಯಲ್ಲಿದ್ದ ಸನ್ನಿವೇಶದಲ್ಲಿ ಈತ ಕಾಮದ ತೆಕ್ಕೆಗೆ ಸಿಕ್ಕ ಜೋಡಿಗಳನ್ನು ಮೇಲಿಂದ ಮೇಲೆ ರಚಿಸಿದ. ಆ ಗುಂಪಿಗೆ ಸೇರಿದ ಅತ್ಯಂತ ಮಹತ್ತ್ವದ ಕೃತಿಯೆಂದರೆ ಈತ 1886ರಲ್ಲಿ ರಚಿಸಿದ ದಿ ಕಿಸ್ (ಚುಂಬನ). ಈತ ಅತ್ಯಂತ ಯಶಸ್ವಿ ಕಲಾವಿದನಾಗಿ ಪ್ರಸಿದ್ಧನಾದ ಬಳಿಕವೂ ಫ್ರಾನ್ಸ್‍ನ ನ್ಯಾಷನಲ್ ಆಟ್ರ್ಸ್ ಅಕಾಡೆಮಿಯ ಜೊತೆ ಹಾಗೂ ಸಾರ್ವಜನಿಕರು ಮತ್ತು ಸಂಸತ್ತಿನ ಜೊತೆ ಜಗಳ ಮುಂದುವರಿಸಿಯೇ ಇದ್ದ. ಇವನ ಯಶಸ್ಸನ್ನು ಸಾರಿ ಹೇಳುವ ನಾಲ್ಕು ಸ್ಮಾರಕ ಕೃತಿಗಳನ್ನು ಇಲ್ಲಿ ಹೆಸರಿಸಬೇಕು; ಕ್ಲಾಡ್ ಲೊರೇನ್, ಭೂದೃಶ್ಯ ಚಿತ್ರಗಾರ; ಡೊಮಿಂಗೊ ಸರ್ಮಿಯೆಂಟೂ, ಆರ್ಜೆಂಟಿನದ ಅಧ್ಯಕ್ಷ; ವಿಕ್ಟರ್ ಹ್ಯೂಗೊ ಹಾಗೂ ಬಾಲ್ಜಾಕ್-ಫ್ರಾನ್ಸಿನ ಲೇಖಕರು-ಈ ವ್ಯಕ್ತಿಗಳನ್ನು ಕುರಿತ ಸ್ಮಾರಕವನ್ನೇನೋ ಈತ ರಚಿಸಿದ, ಆದರೆ ಇವನು ನಿರೀಕ್ಷಿಸದಿದ್ದ ರೀತಿಯಲ್ಲಿ ಜನ ಇವುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

1900ರ ಫ್ರಾನ್ಸ್‍ನ ಪ್ರಪಂಚಮಟ್ಟದ ಪ್ರದರ್ಶನದಲ್ಲಿ (ಎಕ್ಸ್‍ಪೊಸಿಷನ್ ಯೂನಿವರ್ಸಲ್) ಇವನ 150 ಕೃತಿಗಳನ್ನು ಆಯ್ಕೆಮಾಡಲಾಗಿತ್ತು. ಇವುಗಳಲ್ಲಿ ಶಿಲ್ಪಕೃತಿಗಳು ಹಾಗೂ ರೇಖಾಚಿತ್ರಗಳು ಸೇರಿದ್ದವು. ಆ ಪ್ರದರ್ಶನ ಮುಗಿದ ಬಳಿಕ ಈತ ಮ್ಯೂಡನ್‍ನಲ್ಲಿ ಕೊಂಡುಕೊಂಡಿದ್ದ (1896) ಸ್ಥಳಕ್ಕೆ ಈ ಕೃತಿಗಳನ್ನೆಲ್ಲ ಸಾಗಿಸಲಾಯಿತು. ಈತ ವಾಸಿಸುತ್ತಿದ್ದ ಸ್ಥಳ ಒಂದು ಬೃಹತ್ ಕಾರ್ಯಾಗಾರವಾಗಿ ಮಾರ್ಪಟಾ ಗಿತ್ತಲ್ಲದೆ ಈತನ ಶಿಷ್ಯೆಯರೆಂದು ಹೇಳಿಕೊಂಡಿದ್ದ ಇವನ ಅಂತರಂಗದ ಗೆಳತಿಯರ ದಂಡನ್ನೇ ಅಲ್ಲಿ ಕಾಣಬಹುದಾಗಿತ್ತು.
1900ರ ಅನಂತರ ಈತ ಪ್ರಪಂಚಪ್ರಸಿದ್ಧಿಯನ್ನು ಗಳಿಸಿದಾಗ ಎಲ್ಲ ಕಡೆಯಿಂದ ಕೃತಿರಚನೆಗೆ ಬೇಡಿಕೆ ಬಂದಿತು; ವರ್ಣಚಿತ್ರ ಗಳು, ಪ್ರತಿಮೆಗಳು, ಅರ್ಧ ಪ್ರತಿಮೆಗಳನ್ನು ರಚಿಸಿಕೊಡಬೇಕೆಂದು ಜನ ದುಂಬಾಲು ಬಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನ, ಜರ್ಮನಿ, ಆಸ್ಟ್ರಿಯ, ಇಂಗ್ಲೆಂಡ್ ಮೊದಲಾದ ದೇಶಗಳಿಂದ ಕೋರಿಕೆ ಬಂದಿತು. ಇಂಗ್ಲೆಂಡಿನಲ್ಲಿ ಇವನ ಹೆಸರು ಮನೆಮಾತಾಯಿತು. ಅಲ್ಲಿ ಅಸಂಖ್ಯಾತ ಗೆಳೆಯರನ್ನು ಹೊಂದಿದ್ದ ಈತ ಮತ್ತೆ ಮತ್ತೆ ಇಂಗ್ಲೆಂಡಿಗೆ ಭೇಟಿ ನೀಡುತ್ತಿದ್ದ. 1902ರಲ್ಲಿ ಲಂಡನ್‍ನಲ್ಲಿ ಇವನ ಗೌರವಾರ್ಥ ಇವನ ಶಿಷ್ಯರು ಏರ್ಪಡಿಸಿದ್ದ ಔತಣಕೂಟದಲ್ಲಿ ವಿಶೇಷವಾಗಿ ಸನ್ಮಾನ ಮಾಡಲಾಯಿತು. ಕವಿ ವಿಲಿಯಂ ಹೆನ್ಲಿಯ ಪ್ರತಿಮೆಯನ್ನು ವೆಸ್ಟ್‍ಮಿನ್ಸ್‍ಟರ್ ಅಬೆಯಲ್ಲಿ ಸ್ಥಾಪಿಸುವ ಸಂದರ್ಭದಲ್ಲಿ (1907) ಈತ ಅಲ್ಲಿಗೆ ಭೇಟಿ ನೀಡಿದಾಗ ಫ್ರೆಂಚ್ ಸಂಗೀತ ಸಂಯೋಜಕಿ ಕ್ಯಾಮಿಲ್ ಸೆಂಟ್‍ಸೀನ್ ಹಾಗೂ ಅಮೆರಿಕದ ಲೇಖಕ ಮಾರ್ಕ್‍ಟ್ವೀನರ ಜೊತೆಯಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಈತನಿಗೆ ಗೌರವ ಡಾಕ್ಟರೇಟ್ ನೀಡಿತು. ಇಂಗ್ಲೆಂಡಿನ ದೊರೆ ಏಳನೆಯ ಎಡ್ವರ್ಡ್ 1908ರ ಮೇ ತಿಂಗಳಿನಲ್ಲಿ ಈತನ ಮ್ಯೂಡನ್ ಕಾರ್ಯಾಗಾರದಲ್ಲೇ ಈತನನ್ನು ಭೇಟಿಮಾಡಿದ. ಇದು ಕಲಾವಿದನಿಗೆ ಸಂದ ಅತ್ಯಂತ ವಿಶೇಷ ರೀತಿಯ ಗೌರವವಾಗಿತ್ತು.

ಇದೇ ಹೊತ್ತಿನಲ್ಲಿ ಪ್ಯಾರಿಸ್‍ನಲ್ಲೇ ಅತಂತ್ಯ ಸುಂದರವಾದ 18ನೆಯ ಶತಮಾನದ  ಹೋಟೆಲೊಂದರ ಒಂದು ಮಹಡಿಯನ್ನು ಈತ ಕ್ರಯಕ್ಕೆ ತೆಗೆದುಕೊಂಡ. ಈ ಹೊಟೇಲ್ ಬಿರಾನ್ ಕಣ್ಮನ ಸೆಳೆಯವ ಉದ್ಯಾನವನದಿಂದ ಸುತ್ತುವರಿಯಲ್ಪಟ್ಟಿತ್ತು. ಸರ್ಕಾರಕ್ಕೆ ಈತ ತನ್ನೆಲ್ಲ ಕೃತಿಗಳನ್ನು ದಾನಮಾಡಿದ ಪ್ರಯುಕ್ತ ಇದು ಇವನ ಕೃತಿಗಳ ಸಂಗ್ರಹಾಲಯವಾಗಿ ಮಾರ್ಪಟ್ಟಿತ್ತು. 1917 ನವೆಂಬರ್ 17ರಂದು ಈತ ಮ್ಯೂಡನ್‍ನಲ್ಲಿ ತೀರಿಕೊಂಡ. ಈತನ ಸಂಸ್ಕಾರದ ದಿನ ಬಂಡನ್‍ನ ವೆಸ್ಟ್‍ಮಿನ್ಸ್‍ಟರ್‍ನಲ್ಲೂ ಸಂಸ್ಕಾರ ವಿಧಿಗಳನ್ನು ನಡೆಸಲಾಯಿತು.

ಶಿಲ್ಪಕೃತಿಗಳನ್ನು ರಚಿಸುವುದರ ಜೊತೆಗೆ ಈತ ತನ್ನ ಜೀವಿತಾವದಿ üಯಲ್ಲಿ ಗ್ರಂಥಗಳಿಗೆ ಚಿತ್ರ ಬರೆದ; ಬಹುತೇಕ ಸ್ತ್ರೀಯರ ನಗ್ನಚಿತ್ರಗಳಾದರೂ ಅಸಂಖ್ಯಾತ ನಗ್ನರೇಖಾಚಿತ್ರಗಳನ್ನು ಈತ ರಚಿಸಿದ್ದಾನೆ. ಇವನಿಗೆ ಬರೆಹದಲ್ಲೂ ಪರಿಶ್ರಮವಿತ್ತು. ಸ್ನೇಹಿತರ ಸಹಾಯದಿಂದ ಅನೇಕ ಲೇಖನಗಳನ್ನು ಬರೆದಿದ್ದಾನೆ. ಮಧ್ಯಕಾಲೀನ ಕಲೆಯ ಬಗ್ಗೆ ಈತನಿಗೆ ವಿಪರೀತ ವ್ಯಾಮೋಹವಿತ್ತು. ಇವನ ಬರೆಹಗಳಲ್ಲೆಲ್ಲ ಹೆಚ್ಚು ಮಹತ್ತ್ವದ ಕೃತಿ ಚರ್ಚ್‍ಸ್ ಆಫ್ ಫ್ರಾನ್ಸ್ (ಫ್ರಾನ್ಸ್‍ನ ಇಗರ್ಜಿಗಳು, 1914).

ಆಧುನಿಕ ಮೈಕೆಲಂಜೆಲೊ, ಮಹಾಪ್ರತಿಭಾವಂತ ಶಿಲ್ಪ, ಮಹಾ ಮೇಧಾವಿ ಎಂದು ಮುಂತಾಗಿ ಖ್ಯಾತಿ ಪಡೆದಿದ್ದ ಈತ 20ನೆಯ ಶತಮಾನದ ಆದಿಭಾಗದಲ್ಲಿ ಅದ್ವಿತೀಯವಾಗಿ ಮೆರೆದ ಶಿಲ್ಪಿಯೆಂಬುದು ಅತಿಶಯೋಕ್ತಿಯಲ್ಲ. ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಇತನ ಕೃತಿಗಳು ಕಲಾ ವಿರ್ಮರ್ಶಕರ ದೃಷ್ಟಿಯಲ್ಲಿ ಅದೇ ಬಗೆಯ ಆಶ್ಚರ್ಯಜನಕ ವಸ್ತುಗಳಾಗಿಲ್ಲದಿರಬಹುದು. ಆದಾಗ್ಯೂ ತನ್ನ ಅನಂತರದ ಕಲಾವಿದರ ಮೇಲೆ ಈತ ಉಂಟುಮಾಡಿರುವ ಪ್ರಭಾವ ಅತ್ಯಂತ ಗಮನಾರ್ಹವಾದುದಾಗಿದೆ. ಈ ನಿಟ್ಟಿನಲ್ಲಿ ಚಾಲ್ರ್ಸ್ ಡೆಸ್ಟಿಯೂ, ಅರಿಸ್ಟಿಡ್ ಮೆಲೊಲ್, ಎಮಿಲ್ ಬೂರ್ಡೆಲ್-ಮೊದಲಾದ ಫ್ರೆಂಚ್ ಶಿಲ್ಪಿಗಳನ್ನು ನೆನೆಯಬಹುದು. ಪ್ರಪಂಚದ ಪ್ರಧಾನ ವಸ್ತುಸಂಗ್ರಹಾಲ ಯಗಳೆಲ್ಲ ಈತನ ಕೃತಿಯ ಪ್ರತಿಕೃತಿಗಳನ್ನು ಹೊಂದಿವೆ. ಪ್ಯಾರಿಸ್, ಫಿಲಡೆಲ್ಫಿಯ, ಟೋಕಿಯೊ ವಸ್ತುಸಂಗ್ರಹಾಲಯಗಳನ್ನು ಈತನಿಗೆ ಸಮರ್ಪಿಸಲಾಗಿದೆ. ಪಾಶ್ಚಾತ್ಯ ಕಲೆಯ ದೃಢವಾದ ಗುಣವೆಂದರೆ ಮನುಷ್ಯಾಕೃತಿಯನ್ನು ಪರಿಪುಷ್ಟವಾಗಿ ಎರಕ ಹೊಯ್ಯುವ ಕೌಶಲ್ಯ. ಇದನ್ನು ಮತ್ತೆ ಸಾಧಿಸಿದಈತ ಆ ಕಾರಣಕ್ಕಾಗಿ ಪ್ರಮುಖ ಸ್ಥಾನ ಪಡೆದುಕೊಂಡಿದ್ದಾನೆ.					
(ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ